ಅವನ ಕುಡಿ ನೋಟವು ನನ್ನೆದೆಗೆ
ಹೂ ಬಾಣವ ಹೂಡಿತು,
ದುಂಬಿಯ ನೋಡಿ ಹೂ ನಾಚುವಾ ಹಾಗೆ
ನನ್ನ ಮನವೂ ನಾಚಿ ನೀರಾಯಿತು!
ನಾನರಿತೆನು ಆ ಮನಸಿನ ಬೇಗೆಯನು
ಕಂಗಳಲಿ ಕಂಡೆನು ಮೋಹದ ಧಗೆಯನು,
ಕೈಯ ಶಾಖಕ್ಕೆ ಮಂಜು ಕರಗಿದಂತೆ
ಅವನ ತೋಳಲ್ಲಿ ನಾ ಕರಗಿ ನೀರಾದೆನು!
ಬೆಳ್ಮುಗಿಲೇ ಅವನನ್ನು ಸುತ್ತುವರಿದಂತಹ
ಶುದ್ಧ ಹಾಲಿನ ಮೈ ಬಣ್ಣದವನು,
ರೂಪದಲ್ಲಿ ಮನ್ಮಥನನ್ನೇ ಮೀರುವಂತಹ
ಸುಂದರ ಕಂಗಳ ಚೆಲುವ ನನ್ನವನು!
ರೇಷ್ಮೆಯಂತೆ ಮೃದುವಾದ ಕೂದಲು
ಪ್ರೇರೇಪಿಸಿದೆ ನನ್ನವನ ತಲೆ ಸವರಲು,
ಇದೆಲ್ಲಾ ನೋಡಿ ಮೈಮರೆತು ಎಚ್ಚರವಾದೆನು
ಅರಿತೆ ನಾನಾಗ ಕಂಡೆ ಒಂದು ಹಗಲುಗನಸನು!
-ಸ್ವರು
No comments:
Post a Comment