Monday, October 15, 2018

ಮುದ್ದು ಮಾಯಾವಿ

ಬಲು ಮೋಸಗಾರ ನೀನು, ಓ ಮುದ್ದು ಮಾಯಾವಿ!
ನನಗೆ ಗೊತ್ತಿಲ್ಲದೆ ನನ್ನ ಹೃದಯ ಕದ್ದಿರುವಿ,
ಈಗ ಸುದ್ಧಿ ಇಲ್ಲದೆ ಎಲ್ಲಿಗೆ ಹೊರಟಿರುವೆ?
ನೀನಿಲ್ಲದೆ ನಾ ಜೀವ ಇಲ್ಲದ ದೇಹವೆ!

ಆ ನಿನ್ನ ತುಂಟ ನಗು, ಹುಸಿ ಕೋಪ
ತೋರುವೆ ನನ್ನ ಮೇಲೆಯೇ ಪ್ರತಾಪ,
ಆ ನಿನ್ನ ಮುದ್ದು ಮುದ್ದು ಮಾತು
ಹಾಯಾಗಿ ಕಳೆವೆ ನಿನ್ನ ಜೊತೆ ಹೊತ್ತು!

ಮುಂಜಾನೆ ನಿನ್ನ ಮುದ್ದು ಮುಖ ನೋಡುತ್ತಾ
ಆ ಕಣ್ಣ ರೆಪ್ಪೆಗಳಿಗೆ ಸಿಹಿ ಮುತ್ತ ನೀಡುತ್ತಾ,
ಆರಂಭಿಸುವೆ ನನ್ನ ಪಾಲಿನ ಸುದಿನವನ್ನು
ದೇವರಂಥ ನಿನ್ನ ಪಾದಗಳ ಸ್ಪರ್ಶಿಸುತಾ!

ನಿನ್ನ ಮಡಿಲ ಮೇಲೆ ಮಲಗಲು ನಾನು
ಪರಿವೇ ಇಲ್ಲದೆ ಮರೆವೆ ರಾತ್ರಿ ಹಗಲು,
ಅದೆಷ್ಟು ಪುಣ್ಯ ಮಾಡಿರುವೆ ನಾನು
ಅಮ್ಮನಂಥ ಮನಸಿನ ನಿನ್ನ ಪಡೆಯಲು!

ನನಗೀ ಜನ್ಮ ಸಾಲದು ನಿನ್ನ ಹೊಗಳಲು
ಸಾರ್ಥಕ ನನ್ನೀ ಜನ್ಮ ನಿನ್ನ ಪಡೆಯಲು,
ನನ್ನ ಕೊನೆ ಉಸಿರು ಇರೋವರೆಗೂ ನಿನ್ನ ಪ್ರೀತಿಸುವೆ
ಸಾವಿರ ಜನ್ಮಕೂ ನಿನ್ನವಳಾಗೇ ಇರುವ ವರ ಬೇಡುವೆ!

                                                                           -ಸ್ವರು
     
                   

ಹಗಲುಗನಸು

ಅವನ ಕುಡಿ ನೋಟವು ನನ್ನೆದೆಗೆ
ಹೂ ಬಾಣವ ಹೂಡಿತು,
ದುಂಬಿಯ ನೋಡಿ ಹೂ ನಾಚುವಾ ಹಾಗೆ
ನನ್ನ ಮನವೂ ನಾಚಿ ನೀರಾಯಿತು!

ನಾನರಿತೆನು ಆ ಮನಸಿನ ಬೇಗೆಯನು
ಕಂಗಳಲಿ ಕಂಡೆನು ಮೋಹದ ಧಗೆಯನು,
ಕೈಯ ಶಾಖಕ್ಕೆ ಮಂಜು ಕರಗಿದಂತೆ
ಅವನ ತೋಳಲ್ಲಿ ನಾ ಕರಗಿ ನೀರಾದೆನು!

ಬೆಳ್ಮುಗಿಲೇ ಅವನನ್ನು ಸುತ್ತುವರಿದಂತಹ 
ಶುದ್ಧ ಹಾಲಿನ ಮೈ ಬಣ್ಣದವನು,
ರೂಪದಲ್ಲಿ ಮನ್ಮಥನನ್ನೇ ಮೀರುವಂತಹ
ಸುಂದರ ಕಂಗಳ ಚೆಲುವ ನನ್ನವನು!

ರೇಷ್ಮೆಯಂತೆ ಮೃದುವಾದ ಕೂದಲು
ಪ್ರೇರೇಪಿಸಿದೆ ನನ್ನವನ ತಲೆ ಸವರಲು,
ಇದೆಲ್ಲಾ ನೋಡಿ ಮೈಮರೆತು ಎಚ್ಚರವಾದೆನು 
ಅರಿತೆ ನಾನಾಗ ಕಂಡೆ ಒಂದು ಹಗಲುಗನಸನು!
                                                  
                                                                     -ಸ್ವರು

ಪ್ರೀತಿಯ ಕರೆ


ನಿನ್ನನು ಕಂಡ ಕಣ್ಣಿಗೆ ಬೇರೇನೂ ಕಾಣುತಿಲ್ಲ
ಬರಿ ನಿನ್ನ ಮೇಲಿದೆ ನನ್ನ ಗಮನವೆಲ್ಲಾ,
ಒಮ್ಮೆ ನೀ ಕರೆದುಬಿಡು ನನ್ನನ್ನು
ನಾ ಬಯಸುತಿಹೆ ನಿನ್ನೀ ಪ್ರೀತಿಯ ಕರೆಯನ್ನು!

ಭುವಿಯ ನೋಡಿ ಬಾನೇ ಕೆಂಪಾದಂತೆ
ಗಾಳಿಯ ಸಿಹಿಮುತ್ತಿಗೆ ಮರಗಿಡಗಳೇ ನಾಚಿದಂತೆ,
ಬಿರುಸಾದ ಮಳೆಯು ಭೂಮಿಯನ್ನೇ ಅಪ್ಪಿಕೊಂಡಂತೆ
ನಿನ್ನ ನೋಡಿದ ಕ್ಷಣಕೆ ನನ್ನೇ ನಾ ಮರೆತಂತೆ!

ನಿನ್ನ ಹಾಡಿಗೆ ನಾ ದನಿಯಾಗುವೆ
ನಿನ್ನ ಕನಸಿನ ಆಗಸದಿ ತಾರೆಯಾಗುವೆ,
ನಿನ್ನ ಜೀವನ ರಥದ ಚಕ್ರವಾಗುವೆ
ನಿನ್ನ ಉಸಿರಿಗೆ ನಾ ಉಸಿರಾಗುವೆ!

ನಡೆಯುವಾಗ ನಿನ್ನ ಕೈಯ ಹಿಡಿದುಕೊಳ್ಳುವೆ
ನಿನ್ನೊಂದಿಗೆ ನಾ ಪ್ರತಿ ಹೆಜ್ಜೆ ಇಡುವೆ,
ನಿನ್ನ ಕಣ್ಣಲ್ಲಿ ನನ್ನೇ ನಾ ಕಾಣುವೆ
ನಾ ನಿನ್ನನೇ ತುಂಬಾ ನೆಚ್ಚಿಕೊಂಡಿರುವೆ!

ನಿನ್ನ ನೋಡಿ ಸೋಲುವುದು ನನ್ನೀ ಹೃದಯವು
ತಿಳಿದೇ ನನ್ನ ಸ್ಥಿತಿ ನಗುವುದು ನಿನ್ನ ಮನವು,
ಮುಳುಗೋ ಸೂರ್ಯನು ಕೊನೆಗೆ ಸಾಗರದಿ ಲೀನ
ಅಂತೆಯೇ ನಿನ್ನ ಮಡಿಲಲ್ಲೇ ಬಿಡಲೇ ನನ್ನ ಪ್ರಾಣ?
                                             
                                                                              -ಸ್ವರು

ಒಂಟಿ ಕಾಲಿನ ಪಾರಿವಾಳ


ಒಂದು ಮಟಮಟ ಮಧ್ಯಾಹ್ನ
ಕಿಟಕಿಯಿಂದ ಹೊರ ನೋಡುತ್ತಿದ್ದೆ ನಾ,
ಕಂಡೆ ಒಂದು ಕುಂಟ ಪಾರಿವಾಳಾನ
ಒಂಟಿ ಕಾಲಿನ ಒಂಟಿ ಪಯಣ!

ಯಾಕೋ ಆ ಹಕ್ಕಿ ತುಂಬಾ ಸಪ್ಪಗಿದೆ
ಜೊತೆಯಲಿ ಯಾರೂ ಇಲ್ಲದೆ,
ಮುದ್ದುಮುಖದಲ್ಲಿ ಮಂಕಾದ ಭಾವನೆಯು
ಪುಟ್ಟ ಮನದ ತುಂಬಾ ಆಲೋಚನೆಯು!

ಒಂಟಿ ಕಾಲು ಒಂಟಿ ಬಾಳು
ಜೊತೆಗಾರನಿಲ್ಲದ ಬೇಸರವು,
ಇಲ್ಲ ಯಾರ ಆಸರೆ, ಅಕ್ಕರೆಯು
ಆದರೂ ಹೊಟ್ಟೆಗಾಗಿ ಅಲೆದಾಟವು!

ಬಿಸಿಲ ಬೇಗೆಗೆ ದೇಹ ಬಾಡಿದಂತಿದೆ
ನೆರಳಿನ ತಂಪನ್ನು ಬಯಸುತಿದೆ,
ದಿನವೆಲ್ಲಾ ಹಾರಾಡುತ್ತಾ ಸುಸ್ತಾದಂತಿದೆ
ಹಸಿವು ನೀರಡಿಕೆಯೂ ಜೋರಾಗಿದೆ!

ಸರಿಯಾಗಿ ನಿಲ್ಲಲಾಗುತ್ತಿಲ್ಲ ಆ ಪುಟ್ಟ ಹಕ್ಕಿಗೆ 
ದೇಹಭಾರವ ಎಷ್ಟು ಸಹಿಸೀತು ಒಂದೇ ಕಾಲು?
ಎಲ್ಲಾ ಇದ್ದರೂ ಕಷ್ಟ ಪಡುತಾರೆ ಮನುಷ್ಯರು
ಮೂಕ ಪಾರಿವಾಳದ ವೇದನೆ ಕೇಳೋರ್ಯಾರು?

ಹೇಳಬೇಕು ಅಂದುಕೊಂಡೆ ಅದಕೆ
ನಿನ್ನ ನೋವು ಹಂಚಿಕೊಳ್ಳೇ ನನ್ನ ಜೊತೆಗೆ!
ಆದರೆ ಅಷ್ಟರಲ್ಲೇ ಹಾರಿ ಹೋಗಿತ್ತು
ಮತ್ತೆಂದು ಮರಳಿ ಬರುವೆ ಇಲ್ಲಿಗೆ?
                                                       
                                                                  -ಸ್ವರು

ಒಡೆದ ಹೃದಯ


ಒಡೆದ ಹೃದಯದಿ ತುಂಬಿದೆ ನೋವು
ಹೃದಯದ ಮಾತ ನಾನಾಡಲೇನು?
ಕಣ್ಣಿಗೆ ಮಾತ್ರ ತಿಳಿದಿದೆ ಹೃದಯದ ಭಾಷೆ
ಕಣ್ಣೀರು ಹೇಳುತಿದೆ ಎಲ್ಲವನು!

ಒಡೆದ ಕನ್ನಡಿಯ ಚೂರುಗಳ ಬಿಂಬದಂತೆ 
ಹೃದಯದ ಭಾವನೆಗಳು ಚೂರು ಚೂರು,
ಕಾಣುತಿಹೆ ಅದರಲ್ಲಿ ನೂರಾರು ಬಿಂಬವನು
ಪ್ರತಿ ಬಿಂಬವೂ ಹೇಳುತಿದೆ ಒಂದೊಂದು ಕಥೆಯನು!

ಕತ್ತಲೆಯಲ್ಲಿ ಕನ್ನಡಿಯ ನೋಡಿದಂತೆ
ದಟ್ಟ ಅರಣ್ಯದಿ ದಾರಿ ತಪ್ಪಿದಂತೆ,
ಚಂದಿರನಿಲ್ಲದ ಆ ಖಾಲಿ ಆಗಸದಂತೆ
ಹೃದಯದ ಕತ್ತಲೆ ಕೋಣೆಯಲಿ ಕುಳಿತಿರುವೆ!

ಮೊಗದ ಮೇಲೆ ಮೌನದ ಜಯಭೇರಿ
ಹೃದಯದ ಒಳಗೆ ಪ್ರೀತಿಯ ಸಮಾಧಿ,
ಮೂಕ ಪ್ರೇಕ್ಷಕನಂತೆ ಸುಮ್ಮನೆ ಕೂತಿರುವೆ
ನಿನ್ನ ಪ್ರೀತಿಯ ಉತ್ತರಕೆ ಕಾದಿರುವೆ!
                                                     -ಸ್ವರು


ಮುಂಜಾನೆ ರಾಗ

ಮುಂಜಾನೆ ವೇಳೆ ಸೂರ್ಯನ ಆಗಮನ
ಎಲೆಗಳ ಮೇಲೆ ಹನಿಗಳ ನರ್ತನ,
ಹಕ್ಕಿಗಳ ಚಿಲಿಪಿಲಿ ಗಾಯನ
ಹರಿವ ನೀರಿನ ಮಧುರ ರಿಂಗಣ!

ಗಿಡಮರಗಳಿಗೆ ಇಬ್ಬನಿಯ ಸ್ನಾನ 
ಜೊತೆಯಲಿ ತಂಗಾಳಿಯ ಮಿಲನ,
ಸೂರ್ಯನ ಬಿಸಿ ಹೊಂಗಿರಣ
ಮೆಲ್ಲನೆ ಹೂ ಅರಳುತಿದೆ ಕ್ಷಣ ಕ್ಷಣ!

ಕೋಗಿಲೆಯ ಇಂಪಾದ ಸ್ವರ
ಸಾಗರದಲೆಗಳ ಜೋರಾದ ಅಬ್ಬರ,
ಇನ್ನೂ ಕಾದಿದೆ ಮಸುಕಿನ ಭಾವ
ಆಹಾ ಏನು ಚಂದ ಈ ವೈಭವ!

ಆಹಾರಕ್ಕಾಗಿ ಹಕ್ಕಿಗಳ ಹಾರಾಟ
ಗಿಡದಲ್ಲಿ ಅರಳಿರೋ ಹೂಗಳ ಮೈಮಾಟ,
ಕೆಲಸಕ್ಕಾಗಿ ಮನುಷ್ಯನ ಅಲೆದಾಟ
ನಡೆಯುತಿದೆ ಪ್ರತಿ ಕ್ಷಣವೂ ಹೋರಾಟ!

ಶುರು ಆಯ್ತು ಈ ದಿನದ ಬಯಲಾಟ
ದೇವರು ಕೂತಿರುವನು ನಮ್ಮನೆ ನೋಡುತ,
ಸರಿ ದಾರಿಯಲ್ಲಿ ನಡೆಯುತ್ತಿದ್ದರೆ ಎಲ್ಲಾ ಅದ್ಭುತ
ತಪ್ಪು ದಾರಿಯಲ್ಲಿ ಖಂಡಿತ ಕಾದಿದೆ ಅನಾಹುತ!
                                                            -ಸ್ವರು

ನನ್ನ ಮುದ್ದು ಜೀವ


ಓ ನನ್ನ ಮುದ್ದು ಮುದ್ದು ಜೀವವೇ
ನಿನ್ನ ತರ ಬೇರೆ ಯಾರು ಇರಲು ಸಾಧ್ಯವೇ?
ನೀನು ಬರೋ ತನಕ ನಾ ಆಗಿದ್ದೆ ಒಂಟಿ
ನೀ ಬಂದ ಮೇಲೆ ಇನ್ನು ನಾವು ಜಂಟಿ!

ಕನಸು ಕಾಣೋ ಕಣ್ಣು ನಿನ್ನದಾದರೆ
ಅದ ಕಾಪಾಡುವ ಕಣ್ ರೆಪ್ಪೆ ನನ್ನದು,
ನೀ ಗರ್ಭಗುಡಿಯಲ್ಲಿ ಇರುವ ದೇವರಾದರೆ
ನಾ ನಿನ್ನ ಪೂಜಿಸುವ ಪೂಜಾರಿಯು!

ಈ ಹೃದಯ ಮಿಡಿಯುತಿದೆ ನಿನಗಾಗಿ
ಈ ಮನವು ತುಡಿಯುತಿದೆ ನಿನ್ನ ನೋಟಕ್ಕಾಗಿ,
ಈ ನಾಲಗೆಯು ಜಪಿಸುತ್ತಿದೆ ನಿನ್ನ ಹೆಸರನ್ನು
ಈ ಮೌನವು ನೆನಪಿಸುತಿದೆ ಕಳೆದ ಕ್ಷಣಗಳನ್ನು!

ಬದುಕಿನ ಪ್ರತಿ ಹೆಜ್ಜೆಗೆ ನೆರಳಾಗಿ ಇರುವೆ
ನಿನ್ನ ಕೈ ಹಿಡಿದು ಮುಂದೆ ದಾರಿ ತೋರುವೆ,
ನಿನ್ನ ನೆನಪಿನ ಅರಮನೆಗೆ ನಾ ರಾಣಿಯಾಗಿರುವೆ
ನಿನ್ನ ಕನಸಿನೂರಿಗೆ ನಾನೂ ಪಯಣಿಸುವೆ!

ನೂರಾರು ಕನಸುಗಳ ನಿನಗಾಗಿ ಜೋಡಿಸಿರುವೆ
ನಿನ್ನ ಪ್ರೀತಿಯ ಗುಂಗಿನಲ್ಲೇ ಜೀವಿಸುತಿರುವೆ,
ಬಿಟ್ಟು ಹೋಗಬೇಡ ಇನಿಯ ನೀ ಎಂದೆಂದಿಗೂ
ಚೂರು ಮಾಡದಿರು ಈ ಪುಟ್ಟ ಹೃದಯದ ಕನಸನ್ನು!
                                                         
                                                                     -ಸ್ವರು


ಅರಸಿ ಬಂದಿಹೆನು...

ಅರಸಿ ಬಂದಿಹೆನು ನಿನ್ನ ಸನಿಹವನ್ನು
ತೋರಿಸೆಯಾ ಕೊಂಚ ಪ್ರೀತಿಯನ್ನು,
ನೀ ದೂರವಿದ್ದಷ್ಟು ಜೀವ ಹೋದಂತೆ ಭಾಸ
ಹತ್ತಿರವಿರಲು ಮುಖದಲ್ಲಿ ಮಂದಹಾಸ!

ನಿನ್ನ ನೆನಪಿನ ಆ ಮಧುರ ಅಲೆಗಳು
ಅಬ್ಬರಿಸುತಿದೆ ಪ್ರತಿ ಕ್ಷಣ ನನ್ನೆದೆಯಲಿ,
ಪ್ರೀತಿಯ ಸಮುದ್ರದಿ ನಾ ತೇಲುತಿರಲು
ಸಮಯವೇಕೋ ಓಡುತಿದೆ ಶರವೇಗದಲಿ!

ಒಂದೇ ಸಮನೆ ನಿನ್ನನ್ನೇ ನೋಡುತಿರಲು
ತಿಂದು ಬಿಡುವಷ್ಟು ಪ್ರೀತಿಸುವ ಬಯಕೆ,
ನಿನ್ನ ಸಿಹಿಯಾದ ಮಾತುಗಳ ಆಲಿಸುತಿರಲು
ಮುಗಿಯದಿರಲಿ ಈ ಸಮಯ ಎಂಬ ಕೋರಿಕೆ!

ನಾ ನಿನ್ನ ಹೃದಯದಲಿ ಸದಾ ಬೆಚ್ಚಗಿರಲು
ನಿನ್ನ ಪ್ರತಿ ಎದೆಬಡಿತವನು ಆಲಿಸುತಿರುವೆ,
ಆ ಬಡಿತವು ನನ್ನ ಹೆಸರನ್ನೇ ಹೇಳುತಿರಲು
ಈ ಜನ್ಮವೇ ಸಾರ್ಥಕ ಅನಿಸುತಿದೆ!
                                                        - ಸ್ವರು

ಕನಸಿನ ಲೋಕ


ಕನಸಿನ ಲೋಕವ ಸುತ್ತೋಣ ನಾವು
ಹೊಂಗನಸಿನ ತೇರಲ್ಲಿ ಜೊತೆಯಾಗಿ ಕೂತು,
ಎರಡೂ ಬದಿಯಲ್ಲಿ ಸಾಲು ಸಾಲು ಸಂತೆಗಳು
ನೋಡಲು ಬಂದಿವೆ ಚೆಂದದ ಜೋಡಿ ಹಕ್ಕಿಗಳು!

ಎಲ್ಲೆಲ್ಲಿ ನೋಡಿದರೂ ವಜ್ರ, ಮುತ್ತು
ರತ್ನ, ವೈಢೂರ್ಯಗಳ ರಾಶಿ ರಾಶಿಯು,
ಬೀದಿಯಲ್ಲಿ ಬಗೆಬಗೆ ಹೂವಿನ ಅಲಂಕಾರವು
ಎಲ್ಲೆಲ್ಲೂ ಸುಗಂಧ ಹೂಗಳ ಪರಿಮಳವು!

ಹೂಗಳ ರಾಶಿ ಮೇಲೆ ಬರಿಗಾಲಲ್ಲೇ ನಡೆಯಲು
ಪಾದಗಳಿಗೆ ಮೃದು ಸ್ಪರ್ಶದ ಅನುಭವ,
ಜೊತೆಗೆ ತಂಗಾಳಿಯು ಹಿತವಾಗಿ ಮೈಯ ಸೋಕಲು
ವಿವರಿಸಲು ಪದಗಳೇ ಸಾಲುತಿಲ್ಲ ಈ ವೈಭವ!

ರಸ್ತೆಯ ಇಕ್ಕೆಲದಿ ಸುಂದರ ಅರಮನೆಗಳು
ಸ್ವಾಗತ ಕೋರುತಿವೆ ಸಾಲು ಮರಗಳು,
ನೆಲದ ಮೇಲೆ ಹಾಸಿದೆ ಹೂಗಳ ಹಾಸಿಗೆ
ಹಸಿರ ನೇಸರದ ಮಧ್ಯೆ ಸಾಗಿದೆ ಮೆರವಣಿಗೆ!

ಆ ಲೋಕದ ಜನರು ಹೃದಯವಂತರು
ಸತ್ಯ ಧರ್ಮವನ್ನು ಸದಾ ಪಾಲಿಸುವವರು,
ಅನ್ಯಾಯ ಕಪಟ ಮೋಸ ದರೋಡೆ ವಂಚನೆ
ಇದಾವುದ ಅರಿಯದ ಸರಳ ಸಜ್ಜನರು!
                                                                  - ಸ್ವರು

ಪರಮಾದ್ಭುತ ಹೃದಯ

ಅಪರೂಪದ ಪರಮಾದ್ಭುತ ಹೃದಯ
ನೀನೆ ನನ್ನ ಮನದ ಊರಿಗೆ ಒಡೆಯ,
ನೀ ಹೀಗೆ ಇರಲು ಸದಾ ನನ್ನ ಜೊತೆಗೆ
ಬೀಗ ಹಾಕುವೆ ನನ್ನ ಹೃದಯದ ಬಾಗಿಲಿಗೆ!

ಲಗಾಮು ಇಲ್ಲವಲ್ಲ ಈ ಕಳ್ಳ ಹೃದಯಕೆ
ಎಂದು ಕಳುವಾಗುವುದೋ ಎಂಬ ಅಂಜಿಕೆ,
ಪ್ರೀತಿಯ ಸುಳಿವು ಸಿಕ್ಕರೆ ಸಾಕು ಅಷ್ಟೇ
ಹಾರಲು ಶುರು ಪ್ರೀತಿಯ ಮಾಯಾ ಲೋಕಕ್ಕೆ!

ಒಲವಿನ ಉಯ್ಯಾಲೆಯಲಿ ಜೀಕುವೆ ಮನಸಾರೆ
ಕನಸಿನ ಮನೆಯಲಿ ನನ್ನೊಡನೆ ನೀನಿರೆ,
ಮಾತನಾಡಬೇಡ ನೀನು ಈ ಕ್ಷಣ ಏನನ್ನೂ
ಒಮ್ಮೆ ನಾ ನಿನ್ನ ಬಿಗಿದಪ್ಪಿ ಮುದ್ದಿಸಲೇನು?

ಪ್ರೀತಿಯ ಲೋಕದಿ ತೇಲುತ್ತಾ ಹಾಡಲು
ನಲಿವ ನವಿಲಂತೆ ಮೈದುಂಬಿ ಕುಣಿಯಲು,
ಒಲವಾಗಿದ್ದೇ ತಿಳಿಯಲಿಲ್ಲ ಈ ಹೃದಯಕೆ
ಹಕ್ಕಿಯಂತೆ ಹಾರುತಿದೆ ಪ್ರೀತಿಯ ಆಗಸಕೆ!

                                                                     -ಸ್ವರು



ಜೀವನ


ಈ ಜೀವನವೇ ದೇವರ
ಅತಿ ದೊಡ್ಡ ಪಾಠಶಾಲೆ,
ಇಲ್ಲಿ ನಾವು ಕಲಿಯುವ
ಅಗತ್ಯವಿಲ್ಲ ಅಕ್ಷರಮಾಲೆ!

ಹಂತ ಹಂತವಾಗಿ
ಕಲಿಯಬೇಕು ಪ್ರತಿಯೊಬ್ಬರೂ,
ಇದನು ಕಲಿಸೋಕೆ
ಗುರುಗಳಿಲ್ಲ ಯಾರೊಬ್ಬರೂ!

ಖಾಲಿ ಹಾಳೆಯಂತಿರುವ ಬದುಕಿನಲ್ಲಿ
ಬರೆಯೋಣ ಬಾಳೋಣ ನಮ್ಮಿಷ್ಟದಂತೆ,
ಈ ಹಾಳೆ ಯಾರ ಕೈಗೂ ಸಿಗದಿರಲಿ
ಸಿಕ್ಕಲ್ಲಿ ನಿಮ್ಮ ಬಾಳು ನಾಯಿಸಂತೆ!

ಇಲ್ಲಿ ಬರುವ ಕಷ್ಟ ಸುಖಗಳು
ಬಂಧುಮಿತ್ರರಂತೆ,
ಯಾವುದೂ ಶಾಶ್ವತ ಅಲ್ಲ
ಬದುಕಲ್ಲಿ ಎಲ್ಲಾ ಕ್ಷಣಿಕವಂತೆ!

ನಿಂದನೆ ಸೋಲು ಅವಮಾನಗಳನ್ನೆದುರಿಸಿ
ನೀವು ಬೆಳೆಯಬೇಕು ತುಂಬಾ ಎತ್ತರ,
ಒತ್ತಡಕೆ ಸಿಲುಕದಿರಿ ನೀವೆಂದೂ
ಹೋಗಬಹುದು ಸಾವಿನ ಹತ್ತಿರ!

ಕಷ್ಟ ಮೇಲೆ ಮೇಲೆ ಬಂದಾಗ ಎಲ್ಲಾ
ಖಾಲಿ ಅನಿಸೋದು ಸಹಜ,
ಮನಸು ಮಾಡಿದಲ್ಲಿ ಏನು ಬೇಕಾದ್ರೂ
ಸಾಧಿಸಬಹುದು ನೀ ಮನುಜ!

                                                 -ಸ್ವರು

ಸ್ನೇಹ

ಹೃದಯ ಎಂಬ ಕಲ್ಲಿನ ಅರಮನೆಯ
ಮೇಲೆ ಕೆತ್ತಿರುವೆ ನಿನ್ನ ಹೆಸರು,
ಅದೆಂದೂ ಅಳಿಸಿ ಹೋಗದಿರಲಿ ಗೆಳೆಯ
ಇರೋವರೆಗೂ ನನ್ನ ಉಸಿರು!

ನೀ ನನಗೆ ಪರಿಚಯವಾದ ಆ ದಿನವು
ನನಗೆ ಇರಲಿಲ್ಲ ಆಗ ಅರಿವು,
ಸಿಗುವನು ನನಗೆ ಒಂದೊಳ್ಳೆ ಸ್ನೇಹಿತನು
ಯಾವ ಕಾಲಕ್ಕೂ ಬಿಡನು ನನ್ನ ಕೈಯನು!

ಈ ನಿನ್ನ ಗೆಳೆತನದಲ್ಲಿನ ಗುದ್ದಾಟದಲ್ಲಿ
ಇರಬೇಕು ಜಗಳ ಮುನಿಸು,
ಅನಂತರ ಸಮಾಧಾನಿಸುವ ವೇಳೆಯಲ್ಲಿ
ತುಸು ಪ್ರೀತಿ ತೋರಿಸು ಸಾಕು!

ಯಾವ ಕಷ್ಟ ಬಂದರೂ ಜಗ್ಗಲಾರೆ
ನಿನ್ನ ಸ್ನೇಹ ಎಂದೂ ಮರೆಯಲಾರೆ,
ನೆನೆಸಿಕೋ ನನ್ನನು ನಿನ್ನ ಕಷ್ಟ ಕಾಲದಲ್ಲಿ
ನಾನಿರುವೆ ಎಂದೂ ನಿನ್ನ ಜೊತೆಯಾಗಿ!

ತಣ್ಣನೆಯ ಗಾಳಿಯಂತೆ ನೀನು
ಹಕ್ಕಿಗಳ ಚಿಲಿಪಿಲಿಯಂತೆ ನಾನು,
ಆಹಾ ಎಷ್ಟು ಸೊಗಸು ಈ ಸಂಬಂಧವು
ಎಂದೂ ಮುಗಿಯದಿರಲಿ ಈ ಅನುಬಂಧವು!

ಶುದ್ಧ ಹಾಲಿನ ಬಿಳುಪಾದ ನೊರೆಯಂತೆ
ನನ್ನ ನಿನ್ನ  ಸ್ನೇಹವು,
ಈ ಸ್ನೇಹವ ಕಾಪಾಡು ಚಿರವಾಗಿರುವಂತೆ
ಮುಗಿಯುವವರೆಗೂ ಈ ಜೀವನವು!
                                               
                                                         -ಸ್ವರು

ಮನಸಿನ ಮಾತು


ಮನಸೆ ಹೇಳು ಒಂದು ಸಾರಿ
ಕೇಳಬೇಕು ನಿನ್ನ ನೋವು ಒಂದು ಬಾರಿ,
ಏಕೆ ನೀನಿಷ್ಟು ನೊಂದಿರುವೆ?
ಒಳಗೊಳಗೇ ಯಾಕಿಷ್ಟು ಅಳುತಿರುವೆ?

ನಿನ್ನೀ ಅಳು ಯಾರಿಗೂ ಕೇಳದಾಯಿತೇ?
ನಿನ್ನ ನೋವು ಯಾರಿಗೂ ಕಾಣದಾಯಿತೇ?
ಈ ಬೇಸರಕ್ಕೆ ಕಾರಣ ಏನು ಹೇಳು?
ನನ್ನ ಹೃದಯ ಕೇಳಬಯಸುತಿದೆ ನಿನ್ನ ಗೋಳು!

ನೀ ಎಂದೂ ಪ್ರೀತಿಸಿದೆ ಮನಸಾರೆ
ಆದರೂ ತಪ್ಪಲಿಲ್ಲ ಪೆಚ್ಚುಮೋರೆ
ಬೇರೆಯವರ ನೋವಿಗೆ ಇಷ್ಟು ಸ್ಪಂದಿಸುವೇಕೆ?
ಯಾರಿಗೂ ಕಾಣದಾಯಿತೇ ನಿನ್ನ ಪ್ರೀತಿಯ ಆರೈಕೆ?

ಪ್ರತಿಸ್ಪಂದಿಸದಿದ್ದರೆ ಸುಮ್ಮನಿರು
ಅವರ ಗೋಜಿಗೆ ಹೋಗದಿರು,
ಏನಾದ್ರೂ ಮಾಡಿಕೊಂಡು ಇರಲಿ
ನಿನಗೇಕೆ ಅವರ ಉಸಾಬರಿ?

ಪ್ರೀತಿಸಿದಷ್ಟೇ ನೋಯಿಸುವರು 
ಬಗ್ಗಿದಷ್ಟೇ ಗುದ್ದುವರು,
ಎಷ್ಟು ಬೇಕಾದರೂ ಕಾಯಿಸುವರು
ನಿನ್ನ ತಾಳ್ಮೆಯ ಪರೀಕ್ಷಿಸುವರು!

ಇಷ್ಟು ಕಾಟ ಕೊಟ್ಟರೂ ಸುಮ್ಮನಿರುವೆ ಏಕೆ?
ನೀ ತಿರುಗಿ ಅವರಿಗೊಮ್ಮೆ ನೋಯಿಸಬಾರದೇಕೆ?
ಪ್ರತ್ಯುತ್ತರ ನೀಡು ನೀ ಒಂದು ಸಾರಿ
ನಿನ್ನ ನೋವೇನೆಂದು ತಿಳಿಯಲಿ ಒಂದು ಬಾರಿ!

ಯಾವುದಕ್ಕೂ ನೀ ಬಾಗದಿರು
ಎಂದಿಗೂ ನೀನು ನೀನಾಗಿರು,
ಎಲ್ಲರಲೂ  ಪ್ರೀತಿ ತೋರುತಿರು
ಒಳ್ಳೆಯದನ್ನೆ ಸದಾ ಬಯಸುತಿರು!
                                                 
                                                            -ಸ್ವರು

ಪ್ರೀತಿ


ಇದು ಹೃದಯದಲ್ಲಿ ದೇವರು
ಬರೆದಿರುವ ಒಲವಿನ ಅಕ್ಷರ,
ಇದರಿಂದಲೇ ಆಗುವುದು
ಬದುಕಿನ ಸಾಕ್ಷಾತ್ಕಾರ!

ನಮ್ಮಿಂದ ಬಯಸಿದವರಿಗೆ ನೀಡಿದರೆ
ಮಾತ್ರ ಅದಕ್ಕೊಂದು ಬೆಲೆ,
ಇಲ್ಲವಾದಲ್ಲಿ ಆಗಬಹುದು
ಪ್ರೀತಿಯ ಕೊಲೆ!

ಇಷ್ಟ ಅಂತ ಹೇಳಿದರೂ ಯಾರೂ
ತೋರಿಸಲ್ಲ ಪ್ರೀತಿ,
ಯಾಕೆ ಮಾಡುತಿದ್ದಾರೆ ಜಗದ
ಜನರು ಈ ರೀತಿ?

ಬಿಸಿಲ ಬೇಗೆಗೆ ಬರಿದಾದ ಭೂಮಿಯು
ಒಂದು ಹನಿ ಮಳೆ ಹನಿಗೆ ಕಾದಂತೆ,
ನೋವು ತುಂಬಿದ ಮನವು ಕೂಡ
ಒಂದು ಹನಿ ಪ್ರೀತಿನೇ ಬಯಸುತಿದೆ

ನೊಂದ ಹೃದಯಕೆ ಮಾತ್ರ
ಗೊತ್ತಿದೆ ಪ್ರೀತಿಯ ಬೆಲೆ
ಅದಕ್ಕಾಗಿ ಯಾರನ್ನು ಕೂಡ
ನೋಯಿಸಬೇಡಿ ಇನ್ನು ಮೇಲೆ

ದೂರ ಮಾಡಬೇಡಿ ಎಂದೂ
ತುಂಬಾ ಪ್ರೀತಿಸುವ ಹೃದಯಗಳನ್ನು
ಏಕೆಂದರೆ ಅದರ ಹಿಂದಿರುವ  ಮನಸು
ಹುಚ್ಚಾಗಿ ಪ್ರೀತಿಸುತಿದೆ ನಿಮ್ಮನು
                                               
                                                    - ಸ್ವರು

ನನ್ನ ಪುಟ್ಟ ಹೃದಯ


ಓ ನನ್ನ ಪುಟ್ಟ ಹೃದಯವೇ, ಬಾ
ನನ್ನ ಪ್ರೀತಿಸು ತುಂಬಾ ತುಂಬಾ,
ಈ ಹೃದಯದ ತುಂಬಾ ನೀನೇ ತುಂಬಿರುವೆ,
ನಿನ್ನ ಸನಿಹ ಬೇಕೆಂದು ಚಡಪಡಿಸುತಿರುವೆ,
ಎಂದು ನೀ ಬರುವೆ ನನ್ನ ಬಳಿ?
ಕಾಯುತಿರುವೆ ಪ್ರತಿ ನಿಮಿಷವೂ ನಾನು,
ನನ್ನ ಎಂದೂ ಕಾಯಿಸುತಿರುವೆ ನೀನು.
ನೀನಿರದ ಪ್ರತಿ ಗಳಿಗೆಯಲ್ಲೂ,
ಒಂಟಿತನ ಅತಿಯಾಗಿ ಕಾಡುತಿದೆ
ಎಂದು ನೀ ಬರುವೆ?
ಎನ್ನ ಬಿಗಿದಪ್ಪಿಕೊಳ್ಳುವೆ?
ನಿನ್ನ ಸಿಹಿ ಮುತ್ತಿಗೆ ಕಾಯುತಿರುವೆ.
ನಿನ್ನ ಬಿಸಿಯುಸಿರು ನನ್ನ ಮೈ ಸೋಕಲು
ಎದೆಯಲ್ಲಿ ಏನೋ ಕಚಗುಳಿ,
ಅದೆಂಥ ಮಾಯಗಾರ ನೀನು!
ನಿನ್ನ ನೋಡಿದರೆ ಆ ಕ್ಷಣದ ಸುಖಿ ನಾನು.
ಬೇಗನೆ ಬಂದು ಈ ಮನವನ್ನು ತಣಿಸು 
ದಣಿದಿರೋ ಈ ಜೀವಕೆ ಉಪಚಾರ ನೀಡು
ನಿನ್ನ ಸ್ಪರ್ಶವಿಲ್ಲದೆ  ಈ ಮನವು ತುಂಬಾ ನೊಂದಿದೆ
ನೀ ದೂರ ಇರುವ ಆ ಕ್ಷಣದಲಿ,
ಸಮಯವೇ ಸರಿಯುತಿಲ್ಲ ಎಂಬ ಭಾಸವಾಗುತಿದೆ.
ಬಿಸಿಯಾದ ಚಹಾದೊಂದಿಗೆ ನಿನ್ನ ಜೊತೆ ಮಾತನಾಡಲು,
ಸಮಯ ಬೇಗ ಹೋದಂಥ ಅನುಭವ.
ಓ ಕಾಲವೇ ಸ್ವಲ್ಪ ತಡೆ,
ಎನ್ನ ಇನಿಯನು ನನ್ನೊಡನೆ ಇರುವಾಗ
ಏಕೆ ನೀ ಬಾಧಿಸುತಿರುವೆ?
ಸ್ವಲ್ಪ ನೀನು ನಿಲ್ಲಬಾರದೇ ನನಗೋಸ್ಕರ,
ನನ್ನೊಡೆಯನ ಜೊತೆ ಮಾತನಾಡಬೇಕು ನಿರಂತರ.
                                                    
                                                             -ಸ್ವರು

ಮಳೆಗಾಲದ ಒಂದು ದಿನ

ಮಳೆಗಾಲದ ಒಂದು ದಿನ
ನಾ ನೋಡುತ್ತಿದ್ದೆ ಮುಸ್ಸಂಜೆ ಬಾನ,
ಆಗಷ್ಟೇ ಮಳೆ ನಿಂತಿದ್ದ ಕ್ಷಣ
ಎಳೆ ಬಿಸಿಲು ನೋಡಿ ಮೈ ರೋಮಾಂಚನ!

ಇಳೆಗೆ ತಂಪನ್ನೆರೆದು ಮಳೆ ನಿಂತಿದೆ
ಆಗಸವು ಈಗಷ್ಟೇ ತಿಳಿಯಾಗಿದೆ,
ನೀಲಿ ಬಾನಿನಲ್ಲಿ ಹಕ್ಕಿಗಳ ಸ್ವಚ್ಛಂದ ಹಾರಾಟ
ಎಷ್ಟು ಸುಂದರ ಪ್ರಕೃತಿಯ ಈ ನೋಟ!

ಸಂಜೆ ಬಿಸಿಲ ಆ ಹೊಂಬಣ್ಣ
ಆಗಸದಲ್ಲಿ ಹೊನ್ನ ರಾಶಿ ಸುರಿದಂತಿದೆ,
ಸುಂದರವಾಗಿ ಕಂಗೊಳಿಸುತಿದ್ದಾಳೆ ಈ ಇಳೆ
ಹೋಗಲಾಡಿಸಿ ತನ್ನ ಮೈಯ ಕೊಳೆ!

ಬಿರುಸಾದ ಮಳೆಯಿಂದ  ಒದ್ದೆಯಾಗಿದೆ ನೆಲ
ಎಲ್ಲೆಲ್ಲೂ ಹಚ್ಚ ಹಸುರಿನ ಗಿಡಮರ,
ಎಲೆಗಳ ಮೇಲೆ ಪೋಣಿಸಿದಂತಿದೆ ಮುತ್ತಿನ ಹಾರ
ನಡುನಡುವೆ ಆಕಾಶದಲ್ಲಿ ಮಿಂಚಿನ ಪ್ರಹಾರ!

ಭೂಮಿಯು ಹಸಿರು ಉಡುಗೆಯ ಉಟ್ಟಂತಿದೆ
ಸೂರ್ಯನು ದಿನಚರಿ ಮುಗಿಸಿ ಮರಳುವಂತಿದೆ
ಶಾಲೆಯಿಂದ ಮನೆಗೆ ಬರುತ್ತಿರುವ ಮಕ್ಕಳು
ಕವಿಯಬಹುದು ಸ್ವಲ್ಪ ವೇಳೆಯಲ್ಲಿ ಕತ್ತಲು!

ಮತ್ತೆ ಮಳೆ ಬರಬಹುದೋ ಎಂಬ ಭಯ
ನನ್ನ ಒಡೆಯ ಮನೆಗೆ ಬರೋ ಸಮಯ,
ಅವರಿಲ್ಲಿ ಬಂದ ನಂತರ ಸುರಿಯೋ ಮಳೆರಾಯ
ಕೃಪೆ ತೋರಿ ಒಮ್ಮೆ ನೀಡುವೆಯಾ ಅಭಯ!
                
                                                     - ಸ್ವರು


ಹಿತ ಸ್ನೇಹಿತೆ


ನಗಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ,
ನೀ ನನ್ನ ಅಳಿಸಬೇಡ
ಕಣ್ಣೀರನ್ನು ಒರೆಸದಿದ್ದರೂ ಪರವಾಗಿಲ್ಲ,
ನನ್ನ ಕಣ್ಣೀರಿಗೆ ನೀ ಕಾರಣ ಆಗಬೇಡ
ವಜ್ರ ಸಿಕ್ಕಿತು ಎಂದು,
ಬಂಗಾರವ ನೀ ಮರೆಯಬೇಡ
ಹೂವು ಬಾಡಿ ಹೋಯಿತು ಎಂದು,
ಗಿಡವ ನೀ ಕಡಿಯಬೇಡ
ನೆನಪಿರಲಿ
ನಾ ಬಂಗಾರವು ಅಲ್ಲ, ಹೂ ಗಿಡವೂ ಅಲ್ಲ,
ನಿನ್ನ ಹಿತವ ಬಯಸುವ ಸ್ನೇಹಿತೆ ಎಂದು ಮರೆಯಬೇಡ
                                                     - ಸ್ವರು

ವಿಧಿಯಾಟ


ಏಕೆ ಮೌನ ತಾಳಿರುವೆ ನನ್ನ ವಿಧಿಯೇ
ನನ್ನ ಕಣ್ ಒಳಗೆ ಅಡಗಿರುವ ನೋವು
ನಿನಗೆ ಕಾಣುತಿಲ್ಲವೇ?
ಇಂದು ಯಾರ ಸ್ನೇಹವಿಲ್ಲದೆ
ನಾ ಒಂಟಿಯಾಗಿರುವೆ,
ನಾ ಯಾರನ್ನು ಬಯಸಿದೆನೋ
ಅವರು ನನ್ನನು ಪ್ರೀತಿಸಲಿಲ್ಲ.
ಯಾರು ನನ್ನ ಬಯಸಿದರೋ,
ಅವರಿಗೆ ನನ್ನ ಪ್ರೀತಿ ಧಾರೆ ಎರೆದೆ.
ಬಯಸಿದವರು ಸಿಗದಿದ್ದರೂ
ಸಿಕ್ಕಿದವರನ್ನು  ನಾ ಪ್ರೀತಿಸಿದೆ
ನಾನು ಏನು ಹೇಳುತಿಲ್ಲ ಎಂದು ನನ್ನ ಮೇಲೆ ಸವಾರಿ ಮಾಡುತ್ತಿರುವೆಯಾ?
ಓ ವಿಧಿಯೇ ನೀನೆಷ್ಟು ಕ್ರೂರಿ!
ನನ್ನ ಕಣ್ಣೆದುರೇ ನನ್ನ ಇಷ್ಟಪಟ್ಟವರನ್ನು ದೂರ ಮಾಡಿದೆ,
ವಿರಹ ವೇದನೆಯಲ್ಲಿ ನರಳುವಂತೆ ಮಾಡಿದೆ,
ಈಗೇಕೆ ಏನೂ ತಿಳಿಯದಂತೆ ಸುಮ್ಮನಿರುವೆ?
ಎಷ್ಟು ನೋವು ಸಹಿಸಲಿ ನಾನು,
ನನ್ನ ಪ್ರೀತಿಸುವ ಜೀವವ ದೂರ ಒಯ್ಯುವೆ ನೀನು.
ಇನ್ನಾದರೂ ಸುಮ್ಮನಿರುವೆಯಾ ನೀನು?
ನಿನ್ನ ಕಾಟವ ಸಹಿಸಲಾರೆ ಇನ್ನು!
ನನ್ನ ಜೀವದ ಜೀವವು ಬಳಿ ಇದೆ ಇಂದು,
ಅದರೊಂದಿಗೆ ನಾ ಬಾಳಬೇಕು ಎಂದೆಂದೂ,
ದಯ ಮಾಡಿ ನೀ ಕಾಡಬೇಡ ಇನ್ನೆಂದೂ!
                                                       -ಸ್ವರು